ಬ್ರೌನ್ ಸಿಕ್ವಾರ್ಡ್, ಚಾರಲ್ಸ್ ಎಡ್ವರ್ಡ್  
 	1817-94. 19ನೆಯ ಶತಮಾನದ ಉತ್ತರಾರ್ಧದಲ್ಲಿ ಫ್ರಾನ್ಸ್, ಇಂಗ್ಲೆಂಡ್ ಮತ್ತು ಅಮೆರಿಕಗಳಲ್ಲಿ ವೃತ್ತಿವೈದ್ಯ, ಪ್ರಾಧ್ಯಾಪಕ ಹಾಗೂ ವೈದ್ಯವಿದ್ಯಾಸಂಶೋಧಕನಾಗಿ ಕೆಲಸಮಾಡಿ ಪ್ರಸಿದ್ಧಿ ಹೊಂದಿದ ವೈದ್ಯ. ತಂದೆ ಫಿಲಡೆಲ್ಫಿಯದವ-ಹಡಗು ಕ್ಯಾಪ್ಟನ್ ಚಾಲ್ರ್ಸ್ ಎಡ್ವರ್ಡ್ ಬ್ರೌನ್. ಇವನು ಮಾರಿಷಸ್ಸಿಗೆ ಯಾನ ಮಾಡಿದಾಗ ಅಲ್ಲಿಯ ಶಾರ್ಲೆಟ್ ಸಿಕ್ವಾರ್ಡ್ ಎಂಬ ಫ್ರೆಂಚ್ ಮಹಿಳೆಯನ್ನು ಮದುವೆಯಾಗಿ ಅಲ್ಲೇ ನೆಲಸಿದ, ಶೀಘ್ರದಲ್ಲಿ ಅಲ್ಲಿ ಕ್ಷಾಮಬಾಧಿಸಿದ್ದರಿಂದ ಅವರ ಸುಖಜೀವನಕ್ಕೆ ಕುತ್ತು ಬಂತು. ಕ್ಷಾಮನಿವಾರಣೆಗಾಗಿ ಭಾರತದಿಂದ ಅಕ್ಕಿಯನ್ನು ಹಡಗಿನಲ್ಲಿ ಸಾಗಿಸಿಕೊಂಡು ಬರುತ್ತಿದ್ದಾಗ ನೌಕಾಘಾತವಾಗಿ ಕ್ಯಾಪ್ಟನ್ ಬ್ರಾನ್‍ನ ಸಹಿತ ನಾವಿಕರು ಎಲ್ಲ ಮುಳುಗಿಹೋದರು. ಆ ಸಮಯದಲ್ಲಿ ಮಾರಿಷಸ್ಸಿನಲ್ಲಿ ಪೋರ್ಟ್ ಲ್ಯೂಯಿ ಎಂಬ ಪಟ್ಟಣದಲ್ಲಿ ಬ್ರೌನ್‍ಸಿಕ್ವಾರ್ಡನ ಜನನವಾಯಿತು (8-4-1817). ತಂದೆ ಸತ್ತಮೇಲೆ ಹುಟ್ಟಿದ ಈ ಹುಡುಗ ಅಂಗಡಿಗಳಲ್ಲಿ ಚಾಕರಿ ಮಾಡುತ್ತ ಕಷ್ಟದಲ್ಲಿ ಬಾಲ್ಯ ಕಳೆದರೂ ಸ್ಥಳೀಯವಾಗಿಯೇ ವಿದ್ಯಾಭ್ಯಾಸ ಮುಂದುವರಿಸಿ ನಾಟಕ, ಕವನ ರಚಿಸುತ್ತ ಚುರುಕಾದ ಯುವಕವಿದ್ಯಾರ್ಥಿ ಎನ್ನಿಸಿಕೊಂಡ. ಇವನ ಪ್ರತಿಭೆಗೆ ಹೆಚ್ಚು ಅವಕಾಶವಿರುವುದೆಂದು ಅಭಿಮಾನಿಗಳು ಇವನಿಗೆ ಹಣಸಹಾಯ ಒದಗಿಸಿ ಪ್ಯಾರಿಸ್ಸಿಗೆ ಕಳುಹಿಸಿದರು. ಇವನು ಒಂದೆಡೆ ನೆಲಸದೆ ಸ್ಥಳದಿಂದ ಸ್ಥಳಕ್ಕೆ ಅನೇಕ ಬಾರಿ ಅಲೆದಾಡುವುದಕ್ಕೆ ಇದು ಪ್ರಾರಂಭ. ಆದರೆ ಹಾಗೆ ಬೇರೆ ಬೇರೆ ದೇಶಗಳಲ್ಲಿ ಅಷ್ಟಿಷ್ಟು ಕಾಲ ಕೆಲಸ ಮಾಡಿದರೂ ಉನ್ನತ ದರ್ಜೆಯ ವಿಜ್ಞಾನಿ ಎಂದು ಪ್ರತಿಯೊಂದು ಕಡೆಯೂ ಹೆಸರು ಗಳಿಸಿದ್ದು ಇವನ ವ್ಯೆಶಿಷ್ಟ್ಯ.

	ಯುವಕ ಸಿಕ್ವಾರ್ಡ್ ಪ್ಯಾರಿಸ್ಸಿಗೆ ಬಂದಮೇಲೆ ಅಲ್ಲಿಯ ಕಾವ್ಯವಿಮರ್ಶಕರ ವಿಮರ್ಶೆಯಿಂದ ಉತ್ಸಾಹಭಂಗಗೊಂಡವನಾಗಿ ತಾನು ರಚಿಸಿದ್ದ ಕಾವ್ಯ ಹಾಗೂ ನಾಟಕಗಳ ಹಸ್ತಪ್ರತಿಗಳನ್ನು ಸುಟ್ಟುಹಾಕಿ ವೈದ್ಯನಾಗಿ ಬಾಳುವುದು ಒಳ್ಳೆಯದು ಎಂಬ ಅದೇ ವಿಮರ್ಶಕರ ಸಲಹೆಯಂತೆ ವೈದ್ಯ ವಿದ್ಯಾ ಶಾಲೆಗೆ ಸೇರಿದ. ಜೀವನ ಹಾಗೂ ವ್ಯಾಸಂಗಗಳ ವೆಚ್ಚಕ್ಕಾಗಿ ತನ್ನ ತರಗತಿಯ ಇತರ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಟ್ಟು ಹಣ ಗಳಿಸಿದ. ಬುದ್ಧಿವಂತನಾಗಿದ್ದುದರಿಂದಲೂ ಬರೆವಣಿಗೆಯಲ್ಲಿ ಚತುರನಾಗಿದ್ದುದರಿಂದಲೂ ಹೀಗೆ ಮಾಡಿ ವ್ಯಾಸಂಗಗಳನ್ನು ಸಕಾಲದಲ್ಲಿ ಮುಗಿಸಿ 1846ರಲ್ಲಿ ವೈದ್ಯಪದವಿ ಗಳಿಸಿದ. ಯಾವತ್ತೂ ಹಣಕಾಸಿನ ಮುಗ್ಗಟ್ಟಿನಲ್ಲಿದ್ದುದೇ ಅಲ್ಲದೇ ರಾಜಕೀಯ ಟೀಕೆಗಳನ್ನು ಮನಸ್ವೀ ಮಾಡುತ್ತ ಕಾಲಕಳೆಯುತ್ತ ಇದ್ದ ಸಿಕ್ವಾರ್ಡನನ್ನು 1852ರಲ್ಲಿ ಫ್ರಾನ್ಸಿನಿಂದ ಉಚ್ಚಾಟನೆ ಮಾಡಲಾಯಿತು. ಮುಂದೆ ಅವನು ತನ್ನ ತಂದೆಯ ಜನ್ಮದೇಶವಾದ ಅಮೆರಿಕಕ್ಕೆ ತೆರಳಿ ನ್ಯೂಯಾರ್ಕಿನಲ್ಲಿ ಪ್ರಸವವೈದ್ಯನಾಗಿ ಹಣಗಳಿಸಿಕೊಂಡು ಜೀವಿಸುತ್ತಿದ್ದು ಸ್ವಲ್ಪಕಾಲದಲ್ಲೆ (1853) ಪುನಃ ಫ್ರಾನ್ಸಿಗೆ ಹಿಂತಿರುಗಿದ. 1854ರಲ್ಲಿ ಮಾರಿಷಸ್ಸಿನಲ್ಲಿದ್ದು ಅನಂತರ 1855ರಲ್ಲಿ ವರ್ಜಿನಿಯದ ರಿಚ್‍ಮಂಡಿನ ಮೆಡಿಕಲ್ ಕಾಲೇಜಿನಲ್ಲಿ ಶರೀರಕ್ರಿಯಾವಿಜ್ಞಾನದ ಅಧ್ಯಾಪಕನಾಗಿ ನೇಮಕಗೊಂಡು ಅಮೆರಿಕಕ್ಕೆ ವಾಪಸಾದ. ವೈದ್ಯಕೀಯ ವ್ಯಾಸಂಗದಲ್ಲಿ ಶರೀರಕ್ರಿಯಾವಿಜ್ಞಾನದ ವ್ಯಾಸಂಗಕ್ಕೆ ಪ್ರತ್ಯೇಕ ಹಾಗೂ ಪ್ರಮುಖ ಸ್ಥಾನವನ್ನು ಅಮೆರಿಕದಲ್ಲಿ ಗಳಿಸಿಕೊಟ್ಟದ್ದು ಈತನ ಹಿರಿಮೆ. ಅದರೆ ಈ ಸ್ಥಾನವನ್ನು ಬಿಟ್ಟು ಇಂಗ್ಲೆಂಡಿನಲ್ಲಿ ಪ್ರವಾಸ ಕೈಗೊಂಡು ಅಲ್ಲಲ್ಲಿ ವೈದ್ಯ ವಿಷಯವಾಗಿ ಘನ ಉಪನ್ಯಾಸ ಕೊಡುತ್ತ ಪ್ರಸಿದ್ಧಿಗಳಿಸಿದ. ಲಂಡನ್ನಿನ ಮೂರ್ಛೆರೋಗ ಹಾಗೂ ಪಾಶ್ರ್ಚವಾಯು ಪೀಡಿತರ ಅಸ್ಪತ್ರೆಯಲ್ಲಿ ವೈದ್ಯನಾಗಿ ನೇಮಕಗೊಂಡ. ಮುಂದೆ 1863ರಿಂದ 67ರ ತನಕ ಹಾರ್ವರ್ಡ್ ವೈದ್ಯವಿದ್ಯಾಸಂಸ್ಥೆಯಲ್ಲಿ ನರಮಂಡಲ ಕ್ರಿಯೆ ಹಾಗೂ ರೋಗಿಗಳ ವಿಷಯ ಬೋಧಿಸುವ ಪ್ರಾಧ್ಯಾಪಕನಾಗಿ ನೇಮಕಗೊಂಡು ಅಮೆರಿಕಕ್ಕೆ ಪುನಃ ತೆರಳಿದ.

	1868ರಲ್ಲಿ ಪ್ಯಾರಿಸ್ಸಿನ ಫ್ಯಾಕಲ್ಟಿ ಅಫ್ ಮೆಡಿಸ್ಸಿನ್ನಿನಲ್ಲಿ ತುಲನಾತ್ಮಕ ಮತ್ತು ಪ್ರಾಯೋಗಿಕ ರೋಗವಿಜ್ಞಾನದ ಪ್ರಾಧ್ಯಾಪಕನಾಗಿ ನೇಮಕಗೊಂಡು 1872ರ ತನಕ ಈ ಹುದ್ದೆಯಲ್ಲಿದ್ದು ನ್ಯೂಯಾರ್ಕಿನಲ್ಲಿ ವೃತ್ತಿವೈದ್ಯನಾಗಿರಲು ಇಷ್ಟಪಟ್ಟು ಪ್ಯಾರಿಸ್ಸಿನ ಹುದ್ದೆಗೆ ರಾಜಿನಾಮೆ ಕೊಟ್ಟು ಅಮೆರಿಕಕ್ಕೆ ವಾಪಸಾದ. ಫ್ರಾನ್ಸಿನ ಕಾಲೇಜ್ ಅಫ್ ಮೆಡಿಸಿನ್ನಿನಲ್ಲಿ ಪ್ರಾಧ್ಯಾಪಕನಾಗಿದ್ದ ಕ್ಲಾಡ್ ಬರ್ನಾರ್ಡ್ ನಿಧನನಾದ ಮೇಲೆ (1878) ಅವನ ಉತ್ತರಾಧಿಕಾರಿಯಾಗಿ ನೇಮಿಸಲ್ಪಟ್ಟು ಪುನಃ ಪ್ಯಾರಿಸ್ಸಿಗೆ ಬಂದು ನೆಲಸಿದ. ಇಲ್ಲಿ ಮಿದುಳುಬಳ್ಳಿ ಹಾಗೂ ನರಗಳ ಕ್ರಿಯೆಗಳ ಮೇಲೆ ವ್ಯಾಪಕ ಸಂಶೋಧನೆ ಕೈಗೊಂಡದ್ದಲ್ಲದೆ ನಿರ್ನಾಳಗ್ರಂಥಿಗಳ ವ್ಯಾಸಂಗವನ್ನೂ ಪ್ರಾರಂಭಿಸಿದ. ಅಡ್ರೀನಲ್ ಗ್ರಂಥಿಯನ್ನು ತೆಗೆದು ಹಾಕಿದರೆ ವ್ಯಕ್ತಿ ಮರಣ ಹೊಂದುವುದು ಖಾತರಿ ಎಂದು ತೋರಿಸಿದ್ದು ಈ ದಿಶೆಯಲ್ಲಿ ಇವನ ಪ್ರಮುಖ ಕಾರ್ಯ. ಅದರೆ ಇಳಿವಯಸ್ಸಿನಲ್ಲಿ ಸ್ವತಃ ಕಾಯಕಲ್ಪ ಮಾಡಿಕೊಳ್ಳಬಹುದೆಂಬ ಭ್ರಮೆಯಿಂದ ಟಗರುಗಳ ವೃಷಣದ ಸಾರವನ್ನು ಚಚ್ಚುಮದ್ದಾಗಿ ತೆಗೆದುಕೊಳ್ಳಲು ಪ್ರಾರಂಭಿಸಿದ್ದು ಇತರ ವಿಜ್ಞಾನಿಗಳು ಇವನನ್ನು ಲೇವಡಿಮಾಡುವುದಕ್ಕೆ ಕಾರಣವಾಯಿತು. ಪ್ಯಾರಿಸ್ಸಿನ ಹತ್ತಿರದ ಸಿಯೋಕ್ಸ್ ಎಂಬಲ್ಲಿ 1894 ಏಪ್ರಿಲ್ 2ರಂದು ನಿಧನನಾದ.

	ಮಿದುಳು ಬಳ್ಳಿಯ ಎಡ ಅಥವಾ ಬಲ ಅರ್ಧಭಾಗ ರೋಗಗ್ರಸ್ತವಾಗಿ ಅದರ ಕ್ರಿಯೆ ನಾಶವಾಗುವುದರಿಂದ ಒದಗುವ ವಿಶಿಷ್ಟ ಲಕ್ಷಣಗಳನ್ನು ಇವನು ಮೊತ್ತ ಮೊದಲಿಗೆ ನಿರ್ದಿಷ್ಟವಾಗಿ ವಿವರಿಸಿದ್ದರಿಂದ ಆ ಸ್ಥಿತಿಗೆ ಬ್ರೌನ್‍ಸಿಕ್ವಾರ್ಡ್ ಸಿಂಡ್ರೋಮ್ ಎಂದು ಈಗಲೂ ವ್ಯವಹರಿಸುವುದಿದೆ. ತಾನು ವ್ಯಾಸಂಗ ಮಾಡಿದ ವಿಷಯಗಳನ್ನು ಮತ್ತು ಪ್ರಯೋಗ ಫಲಿತಾಂಶಗಳನ್ನು ಬ್ರೌನ್‍ಸಿಕ್ವಾರ್ಡ್ ಅನೇಕ ವೈದ್ಯಕೀಯ ನಿಯತಕಾಲಿಕಗಳಲ್ಲಿ ಪ್ರಚಾರಪಡಿಸಿದ. ಮುಖ್ಯವಾಗಿ ಇವು ಸಿಕ್ವಾರ್ಡ್ ಮತ್ತು ಇತರ ವೈದ್ಯರುಗಳಿಂದಲೇ 1868ರಲ್ಲಿ ಪ್ರಾರಂಭವಾಗಿ 1890ಕ್ಕಿಂತ ಮುಂದಕ್ಕೂ ಪ್ರಕಟವಾಗುತ್ತಿದ್ದ ಅರ್ಕಿವ್ಸ್ ಡಿ ಫಿಸಿಯಾಲಜಿಯಲ್ಲಿ ಪ್ರಕಟವಾದುವು. ಇದಕ್ಕೆ ಮುನ್ನ 1855ರಿಂದ 1863ರ ತನಕ ತಾನೇ ಸಂಪಾದಕನಾಗಿದ್ದ ಜರ್ನಲ್ ಅಫ್ ನಾರ್ಮಲ್ ಫಿಸಿಯಾಲಜಿ ಇನ್ ಮ್ಯಾನ್ ಅಂಡ್ ಅನಿಮಲ್ಸ್‍ನಲ್ಲಿ ಅನೇಕ ಪ್ರಬಂಧಗಳನ್ನು ಪ್ರಚುರಪಡಿಸಿದ್ದೂ ಉಂಟು. ಇದಕ್ಕೂ ಮುಂಚೆ ಕಾಂಪ್ಟಿಸ್ ರೆಂಡಸ್‍ನಲ್ಲಿ 1849ರಿಂದಲೇ ಆಗಾಗ್ಗೆ ಲೇಖನಗಳನ್ನು ಪ್ರಕಟಿಸುತ್ತಿದ್ದ. ಇಂಥ ಪ್ರಕಟಣೆಗಳು ಒಟ್ಟು 500ಕ್ಕೂ ಮೇಲ್ಪಟ್ಟವೆ. ಅಮೆರಿಕದಲ್ಲಿದ್ದಾಗ ಇವನ ಪ್ರಯೋಗ ಫಲಿತಾಂಶಗಳು ಫಿಲಡೆಲ್ಫಿಯ ಮೆಡಿಕಲ್ ಎಕ್ಸಾಮಿನರ್ ಮತ್ತು ಬಾಸ್ಟನ್ ಮೆಡಿಕಲ್ ಅಂಡ್ ಸರ್ಜಿಕಲ್ ಜರ್ನಲ್ಲಿನಲ್ಲಿ ಪ್ರಕಟವಾಗುತ್ತಿದ್ದುವು.									(ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ